ಧನಂಜಯ ಶಿಲ್ಪಿ -
	ಲೋಹ, ಶಿಲಾ ಮತ್ತು ದಾರು ಶಿಲ್ಪಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗಳಿಸಿದ ಧನಂಜಯ ಶಿಲ್ಪಿ ಹುಟ್ಟಿದ್ದು ಕರ್ನಾಟಕದಲ್ಲಿ, ಅಥಣಿಯಂತಹ ಹಿಂದುಳಿದ ಊರಲ್ಲಿ. ಬಡತನದ ಬೇಗೆಯಲ್ಲಿ ಒಳಲುತ್ತಿದ್ದ ಕುಟುಂಬದಲ್ಲಿ. ತಂದೆ ಶಿವಬಸಪ್ಪ, ತಾಯಿ ಮಾಣಿಕ್ಯಮ್ಮ. ಐದು ಜನಮಕ್ಕಳಲ್ಲಿ ಧನಂಜಯ ಕೊನೆಯವದಾಗಿ ಹುಟ್ಟಿದರು (20-1-1934) ತಂದೆ ಶಾಲಾ ಉಪಾಧ್ಯಾಯ ಆರು ರೂಪಾಯಿ ಸಂಬಳದಲ್ಲಿ ಏಳು ಜನರ ಸಂಸಾರ ನಡೆಯಬೇಕಾಗಿತ್ತು. ಶಿಕ್ಷಕ ವೃತ್ತಿಯೊಂದಿಗೆ, ದೈವ ಭಕ್ತರಾದ ಶಿವಬಸಪ್ಪ ಶಿಲಾಶಿಲ್ಪ ರಚನೆಯನ್ನೂ ಮಾಡುತ್ತಿದ್ದರು. ಭನಂಜಯ ಮೂರು ವರ್ಷದವನಾಗಿದ್ದಾಗಲೇ ತಂದೆ ಕೆತ್ತುತ್ತಿದ್ದ ಮೂರ್ತಿಗಳನ್ನು ಬೆರಗು ಗಣ್ಣಿನಿಂದ ನೋಡುತ್ತಿದ್ದ. ಕೆಸರು ಮುದ್ದೆ ಮಣ್ಣಿನಿಂದ ವಯೋಸಹಜ ಆಕಾರಗಳನ್ನು ರೂಪಿಸಿ, ತಂದೆತಾಯಿಯರನ್ನು ಅಚ್ಚರಿಗೊಳಿಸುತ್ತಿದ್ದ. ಎಂದು ಒಂಭತ್ತು ವರ್ಷದವನಾದಾಗ ಜಲವರ್ಣ ಚಿತ್ರಗಳನ್ನೂ ರಚಿಸಲಾರಂಭಿಸಿದ. ಪ್ರಾಥಮಿಕ ಶಾಲೆಯಲ್ಲಿಯೇ ಶಿಕ್ಷಕರಾದ ಗುಡೋಡಗಿ ಕಲಾಭಿವ್ಯಕ್ತಿಗೆ ಉತ್ತೇಜನ ನೀಡುತ್ತಿದ್ದರು. ಪ್ರೌಢ ಶಿಕ್ಷಣಕ್ಕೆ ಬೆಳಗಾವಿಯ ಸರದಾರ ಹೈಸ್ಕೂಲಿಗೆ ಸೇರಿದಾಗ ಸಿ.ವಿ. ಕಾರದಗಿ ಎನ್ನುವ ಶಿಕ್ಷಕರ ಮಾರ್ಗದರ್ಶನದಲ್ಲಿ ಧನಂಜಯ ಉತ್ತಮ ಕಲಾವಿದರಗಿ ಬೆಳೆಯಲು ಅವಕಾಶವಾಯಿತು. ಕಿತ್ತುತಿನ್ನುವ ಬಡತನ. ಬಣ್ಣ ಬ್ರಷ್ ಕೊಳ್ಳಲು ಚೈತನ್ಯವಿಲ್ಲದೆ, ಶಾಲೆಗೆ ಹಾಜರಾಗುತ್ತಿರಲಿಲ್ಲ. ಕಾರದಗಿ ಮಾಸ್ತರರು, ಬಣ್ಣ, ಕಾಗದ, ಬ್ರಷ್‍ಗಳನ್ನು ಕೊಡಿಸುತ್ತಿದ್ದರು. ಶಾಲಾ ಪರೀಕ್ಷೆಯ ಶುಲ್ಕವನ್ನೂ ಕಟ್ಟುತ್ತಿದ್ದರು. ಯಾವುದೇ ಕಷ್ಟ ಬರಲಿ ಚಿತ್ರಕಲೆ ನಿಲ್ಲಿಸಬೇಡ. ನಿನ್ನ ಎಲ್ಲ ತೊಂದರೆಗಳನ್ನು ನಾನು ನಿವಾರಿಸುತ್ತೇನೆ. ಎಂದು ಆಶ್ವಾಸನೆ ನೀಡಿ, ಧನಂಜಯರಲ್ಲಿ ಆತ್ಮ ವಿಶ್ವಾಸ ಮೂಡಿಸಿದರು, ಅವರ ಮಾರ್ಗದರ್ಶನದಲ್ಲಿ ರಚಿಸಿದ ಒಂದು ಕಲಾಕೃತಿಗೆ ಸ್ಪರ್ಧೆಯಲ್ಲಿ 300 ರೂಪಾಯಿಗಳ ಪ್ರಥಮ ಬಹುಮಾನ ಬಂದಾಗ, ಗುರು ಶಿಷ್ಯರಿಗೆ ಆದ ಸಂತೋಷ ವರ್ಣನಾತೀತ. ಕಾರದಗಿ ಮಾಸ್ತರು ಧನಂಜಯರ ಪಾಲಿಗೆ ಪ್ರಾತಃಸ್ಮರಣೀಯರಾದರು. ಸರದಾರ್ ಬೆಳಗಾವಿಯ ಶಾಲೆಯಲ್ಲಿ ಓದುತ್ತಿದುವಾಗಲೇ ಇಂಟರ್ ಮೀಡಿಯಟ್‍ನಲ್ಲಿ ಮೊದಲ ರ್ಯಾಂಕ್ ಪಡೆದರು (1954).

	ಮುಂಬೈಸೇರಿ ದೊಡ್ಡ ಕಲಾವಿದನಾಗಬೇಕೆಂಬ ಹಿರಿಯಾಸೆ. ಆದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ. 1956ರಲ್ಲಿ 110ರೂಪಾಯಿ ವೇತನ ಬರುವ ಗ್ರಾಮಸೇವಕನಾಗಿ ಸೇರ್ಪಡೆ. ಅನಂತರ ಸಮಾಜ ಕಲ್ಯಾಣ ಇಲಾಖೆಯಲ್ಲಿ ಇನ್‍ಸ್ಟೆಕ್ಟರ್ ಆಗಿ ಸೇವೆ. (1957) ಬಿಡಿಓ ಕಛೇರಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಜೇವಂವೆ ಬಾಯಿ ಪರಿಚಯ, ನಂತರ, ಹಂಪಿ ವಿರೂಪಕ್ಷನ ಸನ್ನಿಧಿಯಲ್ಲಿ. ಪಾಣಿಗ್ರಾಹಣ.

	ಉದ್ಯೋಗಸ್ಥ ಜೀವನದಲ್ಲಿ ಬೇಸರ, ಓದು, ಕಲಾಭ್ಯಾಸ ಮುಂದುವರೆಸುವ ತುಡಿತ. ಮುಂಬೈನ ಜೆ.ಜೆ. ಕಲಾಶಾಲೆಗೆ ದಾಖಲು. ಮನೆಯಿಂದ ಬರುತ್ತಿದ್ದ ಹಣ ರೂ 50. ಮುಂಬೈ ಶಹರಿನಲ್ಲಿ ಇದರಿಂದ ಬದುಕು ಸಾಗಿಸಲು ಸಾಲುತ್ತಿರಲಿಲ್ಲ.  ದೂರದ ಸಂಬಂಧಿ ಹನುಮಂತಪ್ಪ ದಂಪತಿಗಳು, ತಿಂಗಳ ಖರ್ಚಿಗೆ ರೂ 30ರಂತೆ ಹಣ ನೀಡುವ ಔದಾರ್ಯ ತೋರಿದರು. ಈ ನೆರವು ಅವರ ಬಾಳಗುರಿ ಸಾಧಿಸಲು ನೆರವಾದವು. ಆದರೆ ಅದೂ ಸಾಕಾಗುತ್ತಿರಲಿಲ್ಲ. ಬಸ್ ಪ್ರಯಾಣಕ್ಕಾಗಿ ಅಣೆ. ಎರಡಾಣೆಗಳಿಗೂ ತತ್ವಾರ ಆಗ 10-12 ಮೈಲಿದೂರದ ಕಾಲೇಜಿಗೆ ನಡೆದೇ ಹೋಗುವುದು ಅನಿವಾರ್ಯವಾಗುತಿತ್ತು. ಧನಂಜಯ ಶಿಲ್ಪಿಗಳು ಎಂತಹ ಕಷ್ಟಕ್ಕೂ ಎದೆಗುಂದಲಿಲ್ಲ. ಅವರ ಲಕ್ಷ್ಯವೆಲ್ಲಾ, ಕಲಾಸಿದ್ಧಿ ಮೊದಲ ವರ್ಷವೇ ಪ್ರಥಮ ರ್ಯಾಂಕ್‍ನಲ್ಲಿ ಉತ್ತೀರ್ಣ ಡಬ್ಬಲ್ ಪ್ರಮೋಷನ್ ಮೂರು ಶಿಷ್ಯಾ ವೇತನಗಳು. ಕಚ್ ಮಹಾರಾಜರ ಎಂಡೊಮೆಂಟ್ ಸ್ಕಾಲರ್‍ಷಿಪ್, ಕೇಂದ್ರ ಸರಕಾರದ ಪ್ರತಿಭಾ ಸ್ಕಾಲರ್‍ಷಿಪ್, ಮತ್ತು ಜಿ.ಜಿ. ಕಲಾಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವ ಸ್ಕಾಲರ್‍ಷಿಪ್, ಈ ಪ್ರತಿಷ್ಠಿತ ಶಿಷ್ಯ ವೇತನಗಳು ಧನಂಜಯರ ಉತ್ಸಾಹವನ್ನು ಇಮ್ಮಡಿಸುದವು. ಅಂತಿಮ ವರ್ಷದ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದೇ ಪಾಸಾಗುತ್ತಾರೆ. ಕಲಾವ್ಯಾಸಂಗದ ಅವಧಿಯಲ್ಲಿ. ನಾನಾ ಕರ್‍ಮರ್‍ಕರ್, ಬಳವಂತದಾಮ ತಾಲೀಮ, ಮೊದಲಾದ ಖ್ಯಾತರ ಸಂಪರ್ಕದಲ್ಲಿ ಕೆಲಸ ಮಾಡಿ ಗಳಿಸಿದ ಅನುಭವ ಅಪಾರ.

	ಬೆನ್ನಟ್ಟಿ ಬಂದ ಬಡತನ, ಹಸಿವನ್ನು ನೀಗಿಸಲು ಶಿಕ್ಷಣ ಮುಂದುವರೆಸುವ ಸಲುವಾಗಿ ಕೆಲಸ ಗಿಟ್ಟಿಸುವುದು ಅನಿವಾರ್ಯ ಪರಿಸ್ಥಿತಿ. ಶಿಲ್ಪಂ ಸ್ಟುಡಿಯೋದಲ್ಲಿ ಎಂದು ತಾಸು ದುಡಿತ. ಅರವತ್ತು ರೂಪಾಯಿ ಸಂಬಳ ತಡವಾಗಿ ಹೋದರೆ. ಬೈಸಿಕೊಳ್ಳುವ ಪ್ರಸಂಗಗಳು. ಇದಕ್ಕೆ ಪರಿಹಾರವಾಗಿ ಶಿಲ್ಪ ಭಾರತಿ ಗೆ ಸೇರ್ಪಡೆ. ಮೂರೇ ದಿನದಲ್ಲಿ ಒಂದು ಅದ್ಭುತ ಪುತ್ಥಳಿ ಮಾಡಿ ಐದು ನೂರು ರೂಪಾಯಿಗಳ ಪುರಸ್ಕಾರಗಳಿಗೆ  ಕೊನೆಯ ವರ್ಷದ ಪರೀಕ್ಷೆ ಮುಗಿವ ತನಕ ಶಿಲ್ಪ ಭಾರತಿಯದೇ ಆಶ್ರಯ. ಕ್ರೈಸ್ತ ಶವಸಂಸ್ಕಾರ ಕಾರ್ಯ ನಡೆಸುವ ಗುತ್ತಿಗೆದಾರನೊಬ್ಬನಿಗಾಗಿ ಸಮಾಧಿಗಳ ಮೇಲೆ ಕೂರಿಸಲು ಅಮೃತ ಶಿಲೆಯಲ್ಲಿ ಪುತ್ಥಳಿಗಳನ್ನು ಮಾಡಿಕೊಟ್ಟಿದ್ದುಂಟು. ಇದರಿಂದ ರಾತ್ರಿ-ಹಗಲು ದುಡಿಯ ಬೇಕಾಯಿತು.

	ಜರ್ಮನಿಯ ಫೈಬರ್‍ಗ್ಲಾಸ್ ತಜ್ಞನೊಬ್ಬನಿಗೆ ಕಲಾಕೃತಿಗಳನ್ನು ರೂಪಿಸುವುದು, ಅದರ ಅಚ್ಚನ್ನು ಸಿದ್ಧಗೊಳಿಸಿ, ಫೈಬರ್‍ಗ್ಲಾಸ್‍ನಲ್ಲಿ ಪ್ರತಿಗಳನ್ನು ತೆಗೆಯುವ ಕೆಲಸ. 800ರೂಪಾಯಿ ಸಂಬಳ ಲಾಭದಲ್ಲಿ ಶೇ 25ರಷ್ಟು ಪಾಲು. ಧನಂಜಯರ ಅದ್ಭುತ ಶಿಲ್ಪ ಕಲೆಗಾರಿಕೆಯನ್ನು ಗಮನಿಸಿದ ಬೆಂಗಾಲ್ ಪಾಟರೀಸ ಸಂಸ್ಥೆ ಚೀಫ್ ಮಾಡಲರದ್ ಹುದ್ದೆಗೆ ಅಮಂತ್ರಣ ಅಲ್ಲಿ ಕೆಲಸ ಮಾಡುತ್ತಿರುವಾಗಲೇ ಜೆ. ಜೆ. ಕಲಾ ಶಾಲೆಯಿಂದ ಉಪನ್ಯಾಸಕ ಹುದ್ದೆಗೆ ಕರೆ ಬರುತ್ತದೆ. ತಾವು ಕಲಿತ ಶಾಲೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಬಿಟ್ಟು ಕೊಡುವುದಿಲ್ಲ. ಶಾಲೆಯಲ್ಲಿ ಕಲ್ಲಿನ ಕೆತ್ತನೆ ವಿಭಾಗ ಆರಂಭಿಸಿ, ಅದನ್ನು ಬೆಳೆಸುತ್ತಾರೆ, ಜನಪ್ರಿಯಗೊಳಿಸುತ್ತಾರೆ. ಹನ್ನೆರಡು ವರ್ಷ ಜೆ.ಜೆ. ಕಲಾ ಶಾಲೆಯಲ್ಲಿ ಅವರು ಸಲ್ಲಿಸಿದ ಸೇವೆ ಅಪೂರ್ವ. ಡೀನ್ ಆಗುವ ಹಂತದಲ್ಲಿ ಸಹೋದ್ಯೋಗಿಗಳ ಕಿರುಕುಳ. ಸ್ವಾಭಿಮಾನಿಗಳಾದ ಧನಂಜಯ ಕೆಲಸಕ್ಕೆ ರಾಜೀನಾಮೆ ನೀಡಿದಾಗ ವಿದ್ಯಾರ್ಥಿಗಳು ಹರತಾಳ, ತರಗತಿಗಳ ಬಹಿಷ್ಕಾರದ ಮೂಲಕ ಸರಕಾರದ ಗಮನ ಸೇಳೆಯುತ್ತಾರೆ. ಶಿಕ್ಷಣ ಮಂತ್ರಿಗಳ ಮಧ್ಯಪ್ರವೇಶದಿಂದ, ವಿದ್ಯಾರ್ಥಿಗಳ ಮನವಿಯನ್ನು ಮನ್ನಿಸಿ ಮತ್ತೆ ಕೆಲಸಕ್ಕೆ ಸೇರ್ಪಡೆ, ಆದರೆ ಕ್ಷುದ್ರ ರಾಜಕೀಯ; 1980ರಲ್ಲಿ ಜೆ.ಜೆ. ಶಾಲೆಯ ಸಂಪರ್ಕ ಕಡಿದು ಸ್ವತಂತ್ರ ವೃತ್ತಿ ಆರಂಭಿಸುವುದು ಧನಂಜಯರಿಗೆ ಅನಿವಾರ್ಯವಾಗುತ್ತದೆ.

	ಧನಂಜಯ ಅವರ ಕೃತಿಗಳು ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರ ಬಂದ ಶಿಲ್ಪಗಳು. ಬದುಕಿನ ವೈವಿಧ್ಯತೆಯನ್ನು ಸಮರ್ಥವಾಗಿ ಪ್ರತಿಬಿಂಬಿಸುವ ಅರ್ಥಪೂರ್ಣ ರಚನಗಾರ ಎಂದು ವಿಮರ್ಶಕರು ಹೇಳುತ್ತಾರೆ.

	ಅಮೃತ ಶಾಲೆಯ ಪುತ್ಥಳಿಗಳು ಧನಂಜಯ ಅವರಿಗೆ ಹೆಚ್ಚು ಗೌರವ ತಂದವು ಕಲ್ಲು, ಸಿಮೆಂಟ್, ಲೋಹ, ಪ್ಲಾಸ್ಟರ್ ಆಫ್ ಪ್ಯಾರಿಸ್ ಹೀಗೆ ವಿವಿಧ ಮಾದರಿಗಳಲ್ಲಿ ಸುಂದರ ಪ್ರತಿಮಗಳನ್ನು ರಚಿಸಿದ್ದಾರೆ. ಇವರ ಕಲಾಕೃತಿಗಳು ದೇಶದಲ್ಲಿ ಮಾತ್ರವಲ್ಲ, ವಿದೇಶ ಸಂಗ್ರಾಹಕರ ಬಳಿಯೂ ಇವೆ. 

	ಅಮೃತಶಿಲೆಯಲ್ಲಿ ಮಾಡಿದ ಶಯನ ಸುಂದರಿ, ತಾಯಿ ಮಗು, ನ್ಯಾಯದೇವತೆ ಇವು ಕೆಲವು ಅವರ ಪ್ರಸಿದ್ಧ ಕಲಾಕೃತಿಗಳು. ಬುದ್ಧ, ಅಂಬೇಡ್ಕರ್, ಶಿವಾಜಿ, ಪಂಪ ಇಂತಹ ಉಬ್ಬು ಶಿಲ್ಪಗಳು ಪ್ರಸಿದ್ಧವಾದ ಹೋಟೆಲ್‍ಗಳಲ್ಲಿ, ಪ್ರತಿಷ್ಠಿತ, ಅಪಾರ್ಟ್‍ಮೆಂಟ್‍ಗಳಲ್ಲಿ ಶೋಭೆ ಹೆಚ್ಚಿಸಿವೆ.

	ಕಲ್ಲು, ಸಿಮೆಂಟು, ಕಂಚು ಅಮೃತಶಿಲೆ, ಪ್ಲಾಸ್ಟರ್ ಆಫ್ ಪ್ಯಾರಿಸ್‍ನಲ್ಲಿ ನಿರ್ಮಿಸಿದ, ವ್ಯಕ್ತಿ ನಿಷ್ಠೆ ಪ್ರತಿಮೆಗಳು, ಉಬ್ಬು ಶಿಲ್ಪಗಳು ಕರ್ನಾಟಕದಲ್ಲಿ ಮಾತ್ರವಲ್ಲ, ಮುಂಬೈ, ಗೋವ, ದೆಹಲಿ ಮೊದಲಾದ ಕಡೆ ತಲೆ ಎತ್ತಿ ನಿಂತಿವೆ.

	ವಾಸ್ತವ ಬದುಕಿನ ವೈವಿಧ್ಯತೆ, ವೈರುಧ್ಯತೆಗಳನ್ನು ಬಿಂಬಿಸುವ ಕಲ್ಪನೆಗಿಂತ ವಸ್ತು ನಿಷ್ಠತೆಗೆ ಆದ್ಯತೆ ನೀಡುವ ಈ ಸೃಜನಶೀಲ ಕಲಾವಿದನಿಗೆ ಲಭ್ಯವಾದ ಪ್ರಶಸ್ತಿಗಳು ಸನ್ಮಾನಗಳು ಅಸಂಖ್ಯ. ವಿದ್ಯಾರ್ಥಿ ದೆಸೆಯಲ್ಲಿ ತಮ್ಮ ಪ್ರತಿಭೆಗೆ ಪುರಸ್ಕಾರ ಪಡೆದವರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಅವರು  ರಚಿಸಿದ ಮೌಲಿಕ ಕಲಾಕೃತಿಗಳಿಗೆ ಕಂಚಿನ ಪದಕ (1961, 62) ರಜತ ಪದಕ (1963) ಬಂಗಾರದ ಪದಕ (1964) ಪಡೆದಿದ್ದಾರೆ. 1966-67ರಲ್ಲಿ ಪ್ರದರ್ಶನಗೊಂಡ ತಾಯಿ ಮಗುವಿನ ಶಿಲ್ಪಕ್ಕೆ ರಾಜ್ಯಪಾಲರಾದ ಆಲಿ ಯಾವರ್ ಜಂಗ ಅವರು ಪ್ರಶಸ್ತಿ ನೀಡಿದ್ದಾರೆ. ತಾಯಿ ಮಗುವಿನ ಸಹಜ, ಸುಂದರವಾದ ಈ ಶಿಲ್ಪ ಮಕ್ಕಳ ಆರೈಕೆಯ ಉತ್ಪನ್ನಗಳ ತಯಾರಿಕಾ ಸಂಸ್ಥೆ ಪ್ರಚಾರ ಪತ್ರಿಕೆಯಲ್ಲಿ ಅಚ್ಚುಮಾಡಿ ಅದನ್ನು ಲಾಭದಾಯಕವಾಗಿ ಬಳಸಿಕೊಂಡಿತು.

	ಕರ್ನಾಟಕ ಲಲಿತಕಲಾ ಅಕಾಡೆಮಿ, ಪ್ರಶಸ್ತಿ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಧನಂಜಯ ಅವರಿಗೆ, ಕರ್ನಾಟಕ ಸರಕಾರ ಅವರ ಜೀವ ಮಾನದ ಸಾಧನೆಗಗಿ 2001ರ ಜಕಣಾಚರಿ ಪ್ರಶಸ್ತಿ ನೀಡಿ ಗೌರವಿಸಿತು. ಬಾಲ್ಯದಲ್ಲಿ ಯೌವನದಲ್ಲಿ ಬಡತನ ಕಾಡಿದ ಧನಂಜಯ ಅವರಿಗೆ ಏರು ವಯಸ್ಸಿನಲ್ಲಿ ಕಾಡಿದ್ದು ಅನಾರೋಗ್ಯ. ಶಿಲ್ಪಿ 1-2-2004ರಂದು ನಿಧನರಾದರು. ಅವರ ಮಕ್ಕಳಾದ ಸಂಜಯ ಸುನೀಲ, ಭರತ್, ಶಿವಕುಮಾರ, ಮಿಲಿಂದ ಇಂಜನಿಯರ್, ಶಿಕ್ಷಣ, ಛಾಯಾಗ್ರಹಣ ಮೊದಲಾದ ವೃತ್ತಿಗಳನ್ನು ಅವಲಂಬಿಸಿದ್ದರೂ, ಕಲಾಸಕ್ತರಾಗಿದ್ದಾರೆ, ಕಲಾ ಸೇವೆ ಮುಂದುವರೆಸಿದ್ದಾರೆ.		*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ